Thursday, July 17, 2008

ನವ - ಜೀವನ

ಹೂವಿನಂತೆ ಕೋಮಲವಾದ ಸುಹಾಸಿನಿಯ ಮನಸ್ಸು ಮುದುಡಿಹೋಗಿತ್ತು. ಮುಖದಲ್ಲಿ ಎಂದೆಂದಿಗೂ ಇರುತಿದ್ದ ಮಂದಹಾಸ ಮಾಯವಾಗಿತ್ತು. ರೂಮಿಗೆ ಬಂದು ಹಾಸಿಗೆಯ ಮೇಲೆ ಬಿದ್ದುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು . ಗೆಳತಿ ಮನೋಹರಿ ಕಾಲೇಜು ಮುಗಿಸಿ ರೂಮಿಗೆ ಬಂದಾಗ ಈ ಸನ್ನಿವೇಶ ನೋಡಿ ಗೊಂದಲಕ್ಕೆ ಸಿಲುಕಿದಂತಾದಳು. ಹೇಗೆ ಸಮಾಧಾನ ಹೇಳುವುದು , ಯಾವ ವಿಷಯಕ್ಕೆಂದು ಹೇಳುವುದು ಎಂದು ತಿಳಿಯದಂತಾಗಿತ್ತು .
ಸುಹಾಸಿನಿ ತಂದೆ ತಾಯಿಗೆ ಒಬ್ಬಳೇ ಮಗಳು. ತುಂಬ ಪ್ರೀತಿಯಿಂದ ಸಾಕಿದ್ದರು. ಅಪ್ಪನ ಮುದ್ದಿನ ಮಗಳು ಅವಳು. ಅವಳ ಆಸೆಗಳನೆಲ್ಲಾ ಅವರು ಪೂರೈಸಿದ್ದರು. ಓದಿನಲ್ಲೂ ಯಾವಾಗಲು ಮುಂದೆ . ಎಂದಿಗೂ ಅವಳೇ ಪ್ರಥಮ ಸ್ಥಾನದಲ್ಲಿರುತ್ತಿದ್ದಳು.
ಪರೀಕ್ಷೆಯ ಫಲಿತಾಂಶ ಆವಾಗ ತಾನೆ ಹೊರಬಿದ್ದಿತ್ತು . ಸುಹಾಸಿನಿ ಈ ಬಾರಿ ದ್ವಿತೀಯ ಸ್ಥಾನದಲ್ಲಿದ್ದಳು . ಮನೋಹರಿ ಪ್ರಥಮ ಸ್ಥಾನ ಗಳಿಸಿದ್ದಳು. ಮನೋಹರಿ ಅದಕ್ಕೆ ಅರ್ಹಳಾಗಿದ್ದಳು. ಮನೋಹರಿಯ ಪರಿಶ್ರಮಕ್ಕೆ ಫಲ ಸಿಕ್ಕಿತ್ತು. ಅವಳ ಕನಸು ನನಸಾಗಿತ್ತು.
ಪರೀಕ್ಷೆಗೆ ಮುನ್ನ ಮನೋಹರಿ ನಡೆಸುತಿದ್ದ ತಯಾರಿ ಸುಹಾಸಿನಿಯಲ್ಲಿ ಭಯ ಹುಟ್ಟಿಸಿತ್ತು. ತನ್ನ ಸ್ಥಾನ ಎಲ್ಲಿ ಮನೋಹರಿಯ ಪಾಲಾಗುತ್ತದೋ ಎಂದು ಯಾವಾಗಲು ಚಿಂತಿಸುತ್ತಿದ್ದಳು. ತಾನು ಓದುವುದಕ್ಕಿಂತ ಅವಳು ಎಷ್ಟು ಓದಿದ್ದಾಳೆ , ಎಷ್ಟು ಮುಗಿಸಿದ್ದಾಳೆ ಎಂಬ ವಿಚಾರಗಳೇ ಮನಸಿನಲ್ಲಿ ಗಿರಕಿ ಹೊಡೆಯುತಿದ್ದವು. ಏನು ಓದಿದರೂ ಏಕಾಗ್ರತೆ ಇರದೇ ಅದು ವ್ಯರ್ಥವೆನಿಸುತ್ತಿತ್ತು. ಕಷ್ಟಪಟ್ಟು ಪಾಠಗಳನ್ನು ನೆನಪಿನ್ನಲಿಡುವ ಸ್ಥಿತಿ ಒದಗಿಬಂದಿತ್ತು . ಸುಹಸಿನಿಯೋ ಅಂತರ್ಮುಖಿ . ತನ್ನ ಈ ಬದಲಾದ ಸ್ಥಿತಿಯನ್ನು ಯಾರೊಡನೆಯೂ ಹೇಳಿಕೊಳ್ಳುತ್ತಿರಲಿಲ್ಲ . ಹೀಗೆ ಅವಳ ಆ ಸ್ಥಾನ ಆ ಯಶಸ್ಸು ಅದನ್ನು ಉಳಿಸಿಕೊಳ್ಳುವ ಆ ಮಹದಾಸೆ ಅವಳ ಈಗಿನ ಸ್ಥಿತಿಗೆ ನಾಂದಿಯಾಗಿತ್ತು .
ಫಲಿತಾಂಶ ಮನೆಯರಿಗೆ ತಿಳಿಸಿದಾಗ ಅವಳ ತಂದೆ " ನೀನು ಈ ಬಾರಿ ಸರಿಯಾಗಿ ಅಭ್ಯಾಸ ಮಾಡಿಲ್ಲ , ಅದಕ್ಕೆ ಹೀಗಾಗಿದೆ " ಎಂದು ಹೇಳಿದ ಕೂಡಲೇ ಅವಳ ದುಖ ಇಮ್ಮಡಿಯಾಗಿತ್ತು . ತನ್ನಲ್ಲೇ ಕೊರಗಿದಳು. ತನ್ನನ್ನೇ ಹಳಿದುಕೊಂಡಳು. ಇನ್ನೇಕೆ ಈ ಜೀವನ ... ಸಾವೇ ಸರಿ ಎಂಬ ಆತುರದ ನಿರ್ಧಾರ ತೆಗೆದುಕೊಂಡಳು .
ಊಟದ ಸಲುವಾಗಿ ಹಾಸ್ಟೆಲಿಗೆ ಬಂದಿದ್ದ ಮನೋಹರಿ ಕಾಲೇಜಿಗೆ ವಾಪಸ್ಸು ಹೋಗಬೇಕಾಗಿತ್ತು . ಮನೋಹರಿಯ ಸಂತೋಷ ಸುಹಾಸಿನಿಯ ದುಃಖದ ಬೆಂಕಿಗೆ ತುಪ್ಪ ಸುರಿದಂತಾಗಿತ್ತು.ಮನೋಹರಿಯೋ ತನ್ನ ಬಂಧುಗಳಿಗೆ ಫೋನು ಮಾಡಿ ತನ್ನ ಸಾಧನೆಯನ್ನು ವರ್ಣಿಸುತಿದ್ದಳು. ಸುಹಾಸಿನಿಯ ಮನಸ್ಥಿತಿಯನ್ನು ಅವಳು ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಫೋನಿನಲ್ಲಿ ಮಾತನಾಡಿಕೊಂಡೆ ಕಾಲೇಜಿಗೆ ಹೊರಟಳು .
ಈ ಸಮಯದ ನಿರೀಕ್ಷಣೆಯಲ್ಲೇ ಇದ್ದ ಸುಹಾಸಿನಿ ತನ್ನ ನಿರ್ಧಾರ ಸರಿಯೆಂದು ಸಾಧಿಸಲು ಮುಂದಾದಳು . ಪರೀಕ್ಷೆಯ ಸಮಯದಲ್ಲಿ ನಿದ್ದೆ ಇಲ್ಲದೆ ನರಳಿದ್ದರಿಂದ ಅವಳಿಗೆ ನಿದ್ದೆ ಅವಶ್ಯಕವೆಂದು ಡಾಕ್ಟರ್ ಅವಳಿಗೆ ನಿದ್ದೆ ಮಾತ್ರೆ ಕೊಟಿದ್ದರು. ಅದನ್ನು ಅವಳು ಈ ರೀತಿ ದುರುಪಯೋಗ ಮಾಡಿಕೊಳ್ಳುತ್ತಾಲೆಂದು ಅವಳೇ ಕನಸಲ್ಲೂ ಎಣಿಸಿರಲಿಲ್ಲ. ಮನಸ್ಸನ್ನು ಗಟ್ಟಿಮಾಡಿಕೊಂಡು ಒಂದೇ ಸಮನೆ ಮಾತ್ರೆಗಳನ್ನು ನುಂಗಿ ಗಟ ಗಟನೆ ನೀರು ಕುಡಿದಳು .
ಸಾವಿಗೆ ಕಾಯುವುದು ಕಷ್ಟ ಎನಿಸಲು ಅಲ್ಲೇ ಇದ್ದ ಸ್ವಾಮಿ ವಿವೇಕಾನಂದರ ಪುಸ್ತಕವನ್ನು ಹಿಡಿದು ಓದಲು ಆರಂಭಿಸಿದಳು. ಓದುತ್ತಿರಲು " ಏಳು , ಎದ್ದೇಳು , ಗುರಿ ಮುಟ್ಟುವ ತನಕ ನಿಲ್ಲದಿರು " ಎಂಬ ವಾಕ್ಯ ಮನಸ್ಸಿನ ಯಾವುದೋ ಮೂಲೆಯಲ್ಲಿರುವ ಬದುಕಬೇಕೆಂಬ ಆಸೆಗೆ ಸ್ಪೂರ್ತಿ ನೀಡಿತ್ತು . ಒಂದು ಸಣ್ಣ ಸೋಲನ್ನು ಸ್ವೀಕರಿಸಲು ಸಾಧ್ಯವಾಗದೆ ಜೀವನವನ್ನು ಕೊನೆಗಾಣಿಸುವ ನಿರ್ಧಾರ ಮಾಡಿದ ತನ್ನ ಮೇಲೇ ತನಗೆ ನಾಚಿಕೆಯೆನಿಸಿತು. ಸಾವಿಗೆ ಶರಣಾಗುತ್ತಿರುವುದು ತನ್ನ ಜೀವನದ ಅತಿ ದೊಡ್ಡ ಸೋಲು ಎನಿಸತೊಡಗಿತು . ಅದರ ಮುಂದೆ ತನ್ನ ಫಲಿತಾಂಶದ ಸೋಲು ಏನು ಇಲ್ಲವೆನಿಸಿತು . ನಿಜವಾದ ಗೆಲುವು ಜೀವನವನ್ನು ಎದುರಿಸುವುದರಲ್ಲಿ ಇದೆ ಎನಿಸಿತು . ತನ್ನ ಆತುರದ ನಿರ್ಧಾರ ತಪ್ಪೆನಿಸತೊಡಗಿತು . ಬದುಕಬೇಕು , ಬದುಕಿ ಜೀವನವನ್ನು ಎದುರಿಸಿ ನಿಜವಾದ ವಿಜಯಿಯಾಗಬೇಕು ಎಂದು ನಿರ್ಧಾರ ಮಾಡಿದಳು.
ಹಾಸ್ಟೆಲ್ನಲ್ಲಿ ಯಾರೂ ಇರಲಿಲ್ಲ . ಎಲ್ಲರೂ ಕಾಲೇಜಿಗೆ ಹೋಗಿದ್ದರು . ಅವಳ ಕಣ್ಣುಗಳು ಆಗಲೇ ಕೆಂಪಗಾಗಿದ್ದವು. ದೇಹದಲ್ಲಿ ಏನಾಗುತ್ತಿದೆ ಎಂಬುದನ್ನೂ ತಿಳಿಯದಷ್ಟು ಅವಳಿಗೆ ನಶೆ ಏರಿತ್ತು . ತನ್ನ ದೇಹದ ಮೂಲೆ ಮೂಲೆಯಲ್ಲಿರುವ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ ರೂಮಿನ ಬಾಗಿಲ ಬಳಿಗೆ ತೆವಳಿಕೊಂಡು ಹೋದಳು. ಚಿಲಕವನ್ನು ತೆಗೆದು " ವಾಚ್ಮನ್ ವಾಚ್ಮನ್ " ಎಂದು ಚೀರಿದಳು . ವಾಚ್ಮನ್ ಹಾಸ್ಟೆಲ್ನ ಹೊರಗಿರುವ ತನ್ನ ರೂಮಿನಲ್ಲಿ ಜೋರಾಗಿ ಟಿವಿ ಹಾಕಿಕೊಂಡು ಊಟ ಮಾಡುತಿದ್ದ . ಸುಹಾಸಿನಿಯ ಕೂಗು ಅವನ ಕಿವಿಗೆ ಬೀಳಲೇ ಇಲ್ಲ. ಸುಹಾಸಿನಿಯ ತನ್ನ ಬದುಕುವ ಪ್ರಯತ್ನವನ್ನು ಮುಂದುವರಿಸುತ್ತಲೇ ಇದ್ದಳು. ಹಾಸ್ಟೆಲ್ಲಿನ ಹೊರೆಗಡೆ ಇದ್ದ ಮನೆಯಲ್ಲಿ ಮಲಗಿದ್ದ ರಘುವಿಗೆ ಈ ಕೂಗು ಕೇಳಿಸಿ ನಿದ್ದೆ ಇಂದ ಎಚ್ಚರಗೊಂಡು ಹೊರಗೆ ಬಂದ . ವಾಚ್ಮನ್ ರೂಮಲ್ಲಿ ಇದ್ದುದನ್ನು ಗಮನಿಸಿ ಅವನ ರೂಮಿಗೆ ಹೋಗಿ ಅವನಿಗೆ " ಯಾರೋ ಕರೀತಿದಾರೆ ನೋಡಿ " ಅಂತ ಹೇಳಿದ. ವಾಚ್ಮನ್ ಬಂದು ನೋಡುವ ವೇಳೆಗೆ ಸುಹಾಸಿನಿಯ ಚೀರಾಟ ನಿಂತು ಹೋಗಿತ್ತು . ಕಾರಿಡಾರಿನಲ್ಲಿ ಬಿದ್ದ ಅವಳನ್ನು ನೋಡಿದ ತಕ್ಷಣ ಅವನಿಗೆ ಏನು ಮಾಡಬೇಕೆಂದೇ ತಿಳಿಯಲಿಲ್ಲ. ತಕ್ಷಣ ರಘುವನ್ನು ಕರೆದ. ರಘು ಸಂದರ್ಭದ ಸನ್ನಿವೇಶವನ್ನರಿತು ತಕ್ಷಣ ಆಸ್ಪತ್ರೆಗೆ ತನ್ನ ಕಾರಿನಲ್ಲೇ ಕರೆದುಕೊಂಡು ಹೋದ .
ಪ್ರಶಾಂತವಾದ ವಾತಾವರಣ . ಹಾಸ್ಟೆಲ್ಲಿನ ಫೋನಿನ ಸದ್ದು ಕೇಳಿಸುತ್ತಿಲ್ಲ , ಹುಡುಗಿಯರ ಕೂಗಾಟ ಗಲಾಟೆ ಕೇಳಿಸುತ್ತಿಲ್ಲ , ಕೆಲಸದವರ ಜಗಳಗಳೂ ಕೇಳಿಸುತ್ತಿಲ್ಲ. ಹಾಸ್ಟೆಲ್ನಲ್ಲಿ ಇದೆ ರೀತಿ ವಾತಾವರಣವಿದ್ದರೆ ಎಷ್ಟು ಚೆನ್ನಾಗಿರುತ್ತದೆ ಅಂತ ಅನ್ನಿಸಿತು . ಮೂಗಿಗೆ ಔಷಧಿ , ಮಾತ್ರೆ , ಪ್ಹೆನಯಿಲಿನ ವಾಸನೆ ಬಡಿದಾಗ ತಾನು ಆಸ್ಪತ್ರೆಯಲ್ಲಿ ಇದ್ದೇನೆ ಎಂದು ತಿಳಿಯಿತು . ಸಾವೆಂಬ ಸೋಲಿನ ವಿರುದ್ದ ತಾನು ಜಯಿಸಿರುವೆನೆಂದು ತಿಳಿದಾಗ ಕಳೆಗುಂದಿದ್ದ ಮುಖದಲ್ಲಿ ಮತ್ತೆ ಮಂದಹಾಸ ಮೂಡಿತು . ಇನ್ನು ಮುಂದೆ ಎಂದೂ ಸಾವಿಗೆ ಪ್ರಯತ್ನಿಸುವುದಿಲ್ಲವೆಂದು ತನ್ನಲ್ಲೇ ಶಪಥ ಮಾಡಿಕೊಂಡಳು .
ರಘು ಒಳಗೆ ಬಂದದ್ದನ್ನು ನೋಡಿ ಕಣ್ಣಿನಲ್ಲೇ ಧನ್ಯವಾದ ಸೂಚಿಸಿದಳು . ತನಗೆ ಮರುಜನ್ಮ ನೀಡಿದ ದೇವರೆಂದು ವಂದಿಸಿದಳು . ಇನ್ನೆಂದೂ ಇಂತಹ ಕೆಲಸಕ್ಕೆ ಕೈ ಹಾಕಬೇಡವೆಂದು ಅವನೂ ಹೇಳಿದನು. ತಂದೆ ತಾಯಿಗೆ ವಿಷಯ ತಿಳಿದ ಮೇಲೆ ಅವರು ಬಹಳ ದುಖಿಸಿದರು . ಪ್ರೀತಿಯ ಅಪ್ಪ ತನ್ನ ತಪ್ಪಿಗೆ ಕ್ಷಮೆಯಾಚಿಸಿದರು .
ಎರಡು ದಿನದ ನಂತರ ಸುಹಾಸಿನಿ ತನ್ನ ಕಾಲೇಜಿಗೆ ಎಂದಿನಂತೆ ಮರಳಿದ್ದಾಳೆ . ಸಹಪಾಠಿಗಳ ಪಿಸುಮಾತುಗಳು ಅವಳ ಕಿವಿಗಳ ಮೇಲೆ ಬಿದ್ದರೂ ಅದು ಅವಳ ಬದಲಾದ ವ್ಯಕ್ತಿತ್ವಕ್ಕೆ ಪೂರಕವಾಗಿದೆಯೇ ಹೊರತು ಮಾರಕವಾಗಿಲ್ಲ. ಇದನ್ನೇ ಸವಾಲಾಗಿ ಸ್ವೀಕರಿಸಿ ಮತ್ತೆ ತನ್ನ ಪ್ರಥಮ ಸ್ಥಾನವನ್ನು ಕಾಯ್ದಿರಿಸುವಲ್ಲಿ ಯಶಸ್ವಿಯಾಗುತ್ತೆನೆಂಬ ಆತ್ಮ ವಿಶ್ವಾಸ ಅವಳಲ್ಲಿದೆ . . ಬನ್ನಿ ಈ ಸಂಧರ್ಭದಲ್ಲಿ ನಾವೆಲ್ಲ ಅವಳಿಗೆ ಶುಭ ಹಾರೈಸೋಣ ........

5 comments:

mruganayanee said...

chennaagide keep writing..

PRAKASH said...

Sandhya

A very nice story :) I liked it. Good one ya. Keep it up. I wish Suhaasini all the best :)

ಪ್ರಕಾಶ್ ಡಿ. ಜಿ. ನಿಡ್ಲೆ said...

its nice. but try to improve your writing.

Gireesh R Balakka said...

keep rocking sandhya,

katheya jeeva eevattina sanniveshagaLige oppuvantittu..

Rgds,
Gireesh

sinchi said...

hey its nice... good u r back to school days..