Tuesday, October 4, 2011

ನಾನು ?

ನಾನೆಂದರೆ ಯಾರು ?
ಯಾರಂತೆಯೋ ನನ್ನ ಉಡುಪು ..
ಇನ್ಯಾರದೋ ವಿಚಾರಗಳ ಪುನರುಚ್ಚಾರ ..
ಮತ್ಯಾರದೋ ಕಟ್ಟಳೆಗಳನುಸಾರ ಬದುಕು ..
ನನ್ನತನವೆಂದರೆ ಏನು ?
ಅವನ ಬಟ್ಟೆ , ಇವನ ವಿಚಾರ , ಮತ್ತೊಬ್ಬನ ಅನುಕರಣೆಗಳ ಸಂಕೀರ್ಣವೇ ?
ಜೀವ ಜಂತುಗಳ ಹುಟ್ಟಿನ ಹಿನ್ನಲೆಯಲ್ಲೇ ಮಿಶ್ರಣವಿರುವಾಗ
ನಾನೊಬ್ಬನಿರಲು ಸಾಧ್ಯವೇ ?
ನಿನ್ನಲ್ಲೇ ಇನ್ನೊಬ್ಬ .. ಮತ್ತೋರ್ವನಿರುವಾಗ .. ಮಗುದೊಬ್ಬನಲ್ಲಿ ನಿನ್ನ ಕಾಣುವುದಿಲ್ಲವೇಕೆ ?

Monday, October 3, 2011

ನಾವೇಕೆ ಖಿನ್ನರಾಗುತ್ತೇವೆ ?

ಹುಚ್ಚು ಮನಸಿನ ಹೆಚ್ಚಾದ ಅಪೇಕ್ಷೆಗಳಿಂದಲೋ ?
ಡೋಲಾಯಮಾನ ಮನಸ್ಥಿತಿಗಳಿಂದಲೋ ?
ಕನಸನು ನುಚ್ಚು ನೂರು ಮಾಡುವ ಸನ್ನಿವೇಷಗಳಿಂದಲೋ ?
ಪರಿಸ್ಥಿತಿಗಳನ್ನು ನಿಭಾಯಿಸಲಾಗದ ಅಧೈರ್ಯದಿಂದಲೋ ?


ಬಾಳಿನ ಬವಣೆಗಳಿಂದಲೋ ?
ಬವಣೆಗಳನ್ನು ಸೃಷ್ಟಿಸುವ ಅತಿ ಆಸೆಗಳಿಂದಲೋ ?
ಕಟ್ಟೆಯೊಡೆಯುವ ದು:ಖಗಳಿಂದಲೋ ?
ದು:ಖವನ್ನುಂಟುಮಾಡುವ ಮನದಾಳದ ಭಾವನೆಗಳಿಂದಲೋ ?


ಸದಾ ಸುಖದಲ್ಲಿರಬೇಕೆಂಬ ಭ್ರಮೆಯಿಂದಲೋ ?
ಬದುಕನ್ನು ಬಂದಂತೆಯೇ ಸ್ವೀಕರಿಸಲಾಗದ ಮನೋಭಾವದಿಂದಲೋ ?
ಏಕೆ ? ಏಕೆ ? ಏಕೆ ?